← John (16/21) → |
1. | ನೀವು ಅಭ್ಯಂತರಪಡಬಾರದೆಂದು ಈ ಮಾತುಗಳನ್ನು ನಾನು ನಿಮಗೆ ಹೇಳಿದ್ದೇನೆ. |
2. | ಅವರು ನಿಮ್ಮನ್ನು ಸಭಾಮಂದಿರಗಳಿಂದ ಹೊರಗೆ ಹಾಕುವರು; ಹೌದು, ನಿಮ್ಮನ್ನು ಕೊಲ್ಲುವವನು ದೇವರ ಸೇವೆ ಮಾಡುತ್ತಾನೆಂದು ನೆನಸುವ ಗಳಿಗೆ ಬರುತ್ತದೆ. |
3. | ಅವರು ತಂದೆಯನ್ನಾಗಲಿ ಇಲ್ಲವೆ ನನ್ನನ್ನಾ ಗಲಿ ತಿಳಿಯದಿರುವ ಕಾರಣ ಇವೆಲ್ಲವುಗಳನ್ನು ನಿಮಗೆ ಮಾಡುವರು. |
4. | ಆದರೆ ಸಮಯ ಬಂದಾಗ ಇವುಗಳ ವಿಷಯವಾಗಿ ನಾನು ನಿಮಗೆ ಹೇಳಿದ್ದೇನೆಂದು ನೀವು ಜ್ಞಾಪಕಮಾಡಿಕೊಳ್ಳುವಂತೆ ಇವುಗಳನ್ನು ನಿಮಗೆ ಹೇಳಿದ್ದೇನೆ. ನಾನು ನಿಮ್ಮ ಸಂಗಡಲೇ ಇದ್ದದರಿಂದ ಪ್ರಾರಂಭದಲ್ಲಿ ಇವುಗಳನ್ನು ನಿಮಗೆ ಹೇಳಲಿಲ್ಲ. |
5. | ಆದರೆ ಈಗ ನನ್ನನ್ನು ಕಳುಹಿಸಿದಾತನ ಬಳಿಗೆ ನಾನು ಹೋಗುತ್ತೇನೆ; ನಿಮ್ಮಲ್ಲಿ ಒಬ್ಬನಾದರೂ--ನೀನು ಎಲ್ಲಿಗೆ ಹೋಗುತ್ತೀ ಎಂದು ನನ್ನನ್ನು ಕೇಳುವದಿಲ್ಲ. |
6. | ಆದರೆ ಇವುಗಳನ್ನು ನಾನು ನಿಮಗೆ ಹೇಳಿದ್ದರಿಂದ ನಿಮ್ಮ ಹೃದಯದಲ್ಲಿ ದುಃಖವು ತುಂಬಿಯದೆ. |
7. | ಆದರೂ ನಾನು ನಿಮಗೆ ಸತ್ಯವನ್ನು ಹೇಳುತ್ತೇನೆ; ನಾನು ಹೋಗುವದು ನಿಮಗೆ ಹಿತಕರವಾಗಿದೆ; ಯಾಕಂದರೆ ನಾನು ಹೋಗದಿದ್ದರೆ ಆದರಿಕನು ನಿಮ್ಮ ಬಳಿಗೆ ಬರುವದಿಲ್ಲ; ನಾನು ಹೋದರೆ ಆತನನ್ನು ನಿಮ್ಮ ಬಳಿಗೆ ಕಳುಹಿಸುವೆನು. |
8. | ಆತನು ಬಂದಾಗ ಪಾಪ ನೀತಿ ನ್ಯಾಯ ತೀರ್ವಿಕೆಯ ವಿಷಯಗಳಲ್ಲಿಯೂ |
9. | ಅವರು ನನ್ನನ್ನು ನಂಬದೆ ಇರುವದರಿಂದ ಪಾಪದ ವಿಷಯವಾಗಿಯೂ |
10. | ನಾನು ನನ್ನ ತಂದೆಯ ಬಳಿಗೆ ಹೋಗುವದರಿಂದ ನೀವು ನನ್ನನ್ನು ಎಂದಿಗೂ ನೋಡದ ಕಾರಣ ನೀತಿಯ ವಿಷಯವಾಗಿಯೂ |
11. | ಇಹಲೋಕಾಧಿಪತಿಯು ನ್ಯಾಯತೀರ್ಪನ್ನು ಹೊಂದಿರುವದರಿಂದ ನ್ಯಾಯ ತೀರ್ವಿಕೆಯ ವಿಷಯವಾಗಿಯೂ ಲೋಕವನ್ನು ಗದರಿಸುವನು. |
12. | ನಾನು ನಿಮಗೆ ಹೇಳಬೇಕಾದ ವಿಷಯಗಳು ಇನ್ನೂ ಬಹಳ ಇವೆ; ಆದರೆ ನೀವು ಈಗ ಅವುಗಳನ್ನು ಹೊರಲಾರಿರಿ; |
13. | ಆದರೆ ಆತನು ಅಂದರೆ ಸತ್ಯದ ಆತ್ಮನು ಬಂದಾಗ ಆತನು ನಿಮ್ಮನ್ನು ಎಲ್ಲಾ ಸತ್ಯಕ್ಕೆ ನಡಿಸುವನು. ಆತನು ತನ್ನಷ್ಟಕ್ಕೆ ತಾನೇ ಮಾತನಾಡದೆ ತಾನು ಕೇಳಿದವುಗಳನ್ನೇ ಮಾತನಾಡುತ್ತಾನೆ; ಮುಂದೆ ಬರುವದಕ್ಕಿರುವ ವಿಷಯಗಳನ್ನು ಆತನು ನಿಮಗೆ ತೋರಿಸುವನು. |
14. | ಆತನು ನನ್ನನ್ನು ಮಹಿಮೆಪಡಿ ಸುವನು; ಆತನು ನನ್ನದರೊಳಗಿಂದ ತೆಗೆದುಕೊಂಡು ನಿಮಗೆ ತಿಳಿಯಪಡಿಸುವನು. |
15. | ತಂದೆಗೆ ಇರುವವು ಗಳೆಲ್ಲವು ನನ್ನವೇ; ಆದದರಿಂದಲೇ ಆತನು ನನ್ನದರೊ ಳಗಿಂದ ತೆಗೆದುಕೊಂಡು ನಿಮಗೆ ತಿಳಿಯಪಡಿಸುವನು ಎಂದು ನಾನು ಹೇಳಿದೆನು. |
16. | ಸ್ವಲ್ಪ ಕಾಲವಾದ ಮೇಲೆ ನೀವು ನನ್ನನ್ನು ನೋಡುವದಿಲ್ಲ; ತಿರಿಗಿ ಸ್ವಲ್ಪ ಕಾಲವಾದ ಮೇಲೆ ನೀವು ನನ್ನನ್ನು ನೋಡುವಿರಿ; ಯಾಕಂದರೆ ನಾನು ತಂದೆಯ ಬಳಿಗೆ ಹೋಗುತ್ತೇನೆ ಅಂದನು. |
17. | ಆಗ ಆತನ ಶಿಷ್ಯರಲ್ಲಿ ಕೆಲವರು--ಈತನು ನಮಗೆ ಹೇಳುವದೇನು? ಸ್ವಲ್ಪ ಕಾಲವಾದ ಮೇಲೆ ನೀವು ನನ್ನನ್ನು ನೋಡುವದಿಲ್ಲ; ತಿರಿಗಿ ಸ್ವಲ್ಪಕಾಲವಾದ ಮೇಲೆ ನೀವು ನನ್ನನ್ನು ನೋಡುವಿರಿ; ಯಾಕಂದರೆ ನಾನು ತಂದೆಯ ಬಳಿಗೆ ಹೋಗುತ್ತೇನೆ ಅನ್ನುತ್ತಾನಲಾ ಎಂದು ತಮ್ಮತಮ್ಮೊಳಗೆ ಮಾತನಾಡಿಕೊಂಡ |
18. | ಆದದರಿಂದ ಅವರು--ಈತನು ಹೇಳುವ ಈ ಮಾತೇನು? ಸ್ವಲ್ಪಕಾಲ ಎಂದು ಹೇಳುತ್ತಾನಲ್ಲಾ? ಈತನು ಹೇಳುವದನ್ನು ನಾವು ಅರಿಯೆವು ಅಂದರು. |
19. | ಯೇಸು ತನ್ನನ್ನು ಪ್ರಶ್ನಿಸುವದಕ್ಕೆ ಅಪೇಕ್ಷಿಸುತ್ತಿ ದ್ದಾರೆಂದು ತಿಳಿದು ಅವರಿಗೆ--ಸ್ವಲ್ಪ ಕಾಲವಾದ ಮೇಲೆ ನೀವು ನನ್ನನ್ನು ನೋಡುವದಿಲ್ಲ; ತಿರಿಗಿ ಸ್ವಲ್ಪಕಾಲವಾದ ಮೇಲೆ ನನ್ನನ್ನು ನೋಡುವಿರಿ ಎಂದು ನಾನು ನಿಮಗೆ ಹೇಳಿದ್ದಕ್ಕೆ ನಿಮ್ಮ ನಿಮ್ಮೊಳಗೆ ವಿಚಾರಿಸಿಕೊಳ್ಳುತ್ತೀರೋ? |
20. | ನಾನು ನಿಮಗೆ ನಿಜನಿಜವಾಗಿ ಹೇಳುತ್ತೇನೆ--ನೀವು ಅಳುತ್ತಾ ಗೋಳಾಡುವಿರಿ, ಆದರೆ ಲೋಕವು ಸಂತೋಷಿಸುವದು; ನೀವು ದುಃಖಿಸುವಿರಿ, ಆದರೆ ನಿಮ್ಮ ದುಃಖವು ಹೋಗಿ ಆನಂದವು ಬರುವದು. |
21. | ಒಬ್ಬ ಸ್ತ್ರೀಗೆ ತನ್ನ ಪ್ರಸವವೇದನೆಯ ಗಳಿಗೆ ಬಂದಾಗ ದುಃಖವಿರುವದು; ಆಕೆಯು ಮಗುವನ್ನು ಹೆತ್ತಕೂಡಲೆ ಈ ಲೋಕದೊಳಗೆ ಒಬ್ಬ ಮನುಷ್ಯನು ಹುಟ್ಟಿದನೆಂದು ಸಂತೋಷದಿಂದ ಆ ನೋವನ್ನು ಆಕೆಯು ನೆನಪಿಗೆ ತರುವದೇ ಇಲ್ಲ. |
22. | ಆದದರಿಂದ ಈಗ ನಿಮಗೆ ದುಃಖವುಂಟು; ಆದರೆ ನಾನು ನಿಮ್ಮನ್ನು ತಿರಿಗಿ ನೋಡುವೆನು; ಆಗ ನಿಮ್ಮ ಹೃದಯವು ಉಲ್ಲಾಸಿಸುವದು; ನಿಮ್ಮ ಆನಂದವನ್ನು ನಿಮ್ಮಿಂದ ಯಾರೂ ತೆಗೆಯುವದಿಲ್ಲ. |
23. | ಆ ದಿನದಲ್ಲಿ ನೀವು ನನ್ನನ್ನು ಏನೂ ಕೇಳುವದಿಲ್ಲ. ನಾನು ನಿಮಗೆ ನಿಜನಿಜವಾಗಿ ಹೇಳುತ್ತೇನೆ--ನೀವು ನನ್ನ ಹೆಸರಿನಲ್ಲಿ ತಂದೆಯನ್ನು ಏನು ಕೇಳಿಕೊಂಡರೂ ಅದನ್ನು ಆತನು ನಿಮಗೆ ಕೊಡುವನು. |
24. | ನೀವು ಇದುವರೆಗೆ ನನ್ನ ಹೆಸರಿನಲ್ಲಿ ಏನೂ ಬೇಡಿಕೊಳ್ಳಲಿಲ್ಲ; ಬೇಡಿಕೊಳ್ಳಿರಿ, ನಿಮಗೆ ದೊರೆಯುವದು; ಆಗ ನಿಮ್ಮ ಆನಂದವು ಪರಿಪೂರ್ಣವಾಗುವದು. |
25. | ಇವುಗಳನ್ನು ನಾನು ಸಾಮ್ಯಗಳಿಂದ ನಿಮಗೆ ಹೇಳಿದ್ದೇನೆ; ಆದರೆ ನಾನು ಇನ್ನು ಸಾಮ್ಯಗಳಿಂದ ಮಾತನಾಡದೆ ತಂದೆಯ ವಿಷಯ ನಿಮಗೆ ಸ್ಪಷ್ಟವಾಗಿ ತಿಳಿಸುವ ಸಮಯ ಬರುತ್ತದೆ. |
26. | ಆ ದಿವಸದಲ್ಲಿ ನೀವು ನನ್ನ ಹೆಸರಿನಲ್ಲಿ ಬೇಡಿಕೊಳ್ಳುವಿರಿ; ನಿಮಗೋಸ್ಕರ ತಂದೆ ಯನ್ನು ಕೇಳಿಕೊಳ್ಳುವೆನೆಂದು ನಾನು ನಿಮಗೆ ಹೇಳು ವದಿಲ್ಲ. |
27. | ನೀವು ನನ್ನನ್ನು ಪ್ರೀತಿಸಿ ನಾನು ದೇವರ ಬಳಿಯಿಂದ ಹೊರಟುಬಂದೆನೆಂದು ನಂಬಿದ್ದರಿಂದ ತಂದೆಯು ತಾನೇ ನಿಮ್ಮನ್ನು ಪ್ರೀತಿಸುತ್ತಾನೆ. |
28. | ನಾನು ತಂದೆಯ ಬಳಿಯಿಂದ ಹೊರಟು ಈ ಲೋಕಕ್ಕೆ ಬಂದಿದ್ದೇನೆ; ತಿರಿಗಿ ಈ ಲೋಕವನ್ನು ಬಿಟ್ಟು ತಂದೆಯ ಬಳಿಗೆ ಹೋಗುತ್ತೇನೆ ಅಂದನು. |
29. | ಆತನ ಶಿಷ್ಯರು ಆತನಿಗೆ--ಇಗೋ, ಈಗ ನೀನು ಸಾಮ್ಯರೂಪದಲ್ಲಿ ಮಾತನಾಡದೆ ಸ್ಪಷ್ಟವಾಗಿಯೇ ಮಾತನಾಡುತ್ತೀ. |
30. | ನೀನು ಎಲ್ಲಾ ವಿಷಯಗಳನ್ನು ತಿಳಿದಾತನೆಂದೂ ಯಾವ ಮನುಷ್ಯನು ನಿನ್ನನ್ನು ಕೇಳು ವದು ಅಗತ್ಯವಿಲ್ಲವೆಂದೂ ಈಗ ನಮಗೆ ನಿಶ್ಚಯ ವಾಯಿತು; ಇದರಿಂದ ನೀನು ದೇವರ ಕಡೆಯಿಂದ ಹೊರಟು ಬಂದಿದ್ದೀ ಎಂದು ನಾವು ನಂಬುತ್ತೇವೆ ಅಂದರು. |
31. | ಅದಕ್ಕೆ ಯೇಸು ಪ್ರತ್ಯುತ್ತರವಾಗಿ ಅವರಿಗೆ--ಈಗ ನೀವು ನಂಬುತ್ತೀರೋ? |
32. | ಇಗೋ, ಒಬ್ಬೊಬ್ಬನು ತನ್ನ ತನ್ನ ಸ್ಥಳಕ್ಕೆ ಚದರಿ ಹೋಗಿ ನನ್ನನ್ನು ಒಂಟಿಗನಾಗಿ ಬಿಡುವ ಗಳಿಗೆ ಬರುವದು. ಹೌದು, ಈಗಲೇ ಬಂದಿದೆ. ಆದಾಗ್ಯೂ ನಾನು ಒಂಟಿಗನಲ್ಲ; ತಂದೆಯು ನನ್ನ ಸಂಗಡ ಇದ್ದಾನೆ. |
33. | ನನ್ನಲ್ಲಿ ನಿಮಗೆ ಸಮಾಧಾನವು ಉಂಟಾಗುವಂತೆ ಇವುಗಳನ್ನು ನಾನು ನಿಮಗೆ ಹೇಳಿದ್ದೇನೆ, ಲೋಕದಲ್ಲಿ ನಿಮಗೆ ಸಂಕಟ ಇರುವದು; ಆದರೆ ಧೈರ್ಯವಾಗಿರ್ರಿ; ನಾನು ಲೋಕ ವನ್ನು ಜಯಿಸಿದ್ದೇನೆ ಅಂದನು. |
← John (16/21) → |