← Job (16/42) → |
1. | ಯೋಬನು ಉತ್ತರ ಕೊಟ್ಟು ಹೇಳಿದ್ದೇನಂದರೆ-- |
2. | ಇವುಗಳ ಹಾಗೆ ಅನೇಕವಾದ ವುಗಳನ್ನು ಕೇಳಿದ್ದೇನೆ. ನೀವೆಲ್ಲರೂ ಕಾಟದ ಆದರಣೆ ಕೊಡುವವರೇ. |
3. | ವ್ಯರ್ಥವಾದ ಮಾತುಗಳಿಗೆ ಅಂತ್ಯ ಉಂಟೋ? ಉತ್ತರ ಕೊಡುವ ಹಾಗೆ ನಿನ್ನನ್ನು ಧೈರ್ಯ ಪಡಿಸುವದು ಯಾವದು? |
4. | ನಿಮ್ಮ ಪ್ರಾಣವು ನನ್ನ ಪ್ರಾಣದ ಸ್ಥಳದಲ್ಲಿ ಇದ್ದರೆ ನಾನು ಸಹ ನಿಮ್ಮ ಹಾಗೆ ಮಾತಾಡಬಹುದು; ಮಾತುಗಳನ್ನು ನಿಮ್ಮ ಮೇಲೆ ಕೂಡಿಸಬಹುದು; ನಿಮಗೆ ವಿರೋಧವಾಗಿ ನನ್ನ ತಲೆ ಅಲ್ಲಾಡಿಸಬಹುದು. |
5. | ನನ್ನ ಬಾಯಿಂದ ನಿಮ್ಮನ್ನು ಬಲ ಪಡಿಸುವೆನು. ನನ್ನ ತುಟಿಗಳ ಆದರಣೆ ನಿಮಗೆ ಉಪ ಶಮನ ಮಾಡುವದು. |
6. | ನಾನು ಮಾತನಾಡಿದರೆ ನನ್ನ ನೋವಿಗೆ ಉಪಶಮನವಾಗುವದಿಲ್ಲ; ನಾನು ಬಿಟ್ಟರೆ ನನಗೆ ಏನು ಉಪಶಮನವಾದೀತು? |
7. | ಆತನು ಈಗ ನನ್ನನ್ನು ದಣಿಸಿದ್ದಾನೆ; ನನ್ನ ಜೊತೆಯವರನ್ನೆಲ್ಲಾ ನೀನು ಹಾಳುಮಾಡಿದಿ. |
8. | ನನ್ನನ್ನು ಸುಕ್ಕುಗಳಿಂದ ತುಂಬಿಸಿದ್ದೀ; ಅವು ನನಗೆ ವಿರೋಧವಾಗಿ ಸಾಕ್ಷಿಯಾದವು; ನನ್ನ ಬಡಕಲತನವು ನನ್ನಲ್ಲಿ ಎದ್ದು ನನ್ನ ಮುಖದ ಎದುರು ಸಾಕ್ಷಿಕೊಡುತ್ತವೆ. |
9. | ಆತನು ತನ್ನ ಕೋಪದಲ್ಲಿ ನನ್ನನ್ನು ಹರಿದುಬಿಡುತ್ತಾನೆ; ನನ್ನನ್ನು ಹಗೆಮಾಡುತ್ತಾನೆ. ತನ್ನ ಹಲ್ಲುಗಳನ್ನು ನನ್ನ ಮೇಲೆ ಕಡಿಯುತ್ತಾನೆ; ನನ್ನ ವೈರಿಯು ತನ್ನ ಕಣ್ಣುಗಳನ್ನು ನನ್ನ ಮೇಲೆ ಮಸೆಯುತ್ತಾನೆ. |
10. | ನನ್ನ ಮೇಲೆ ತಮ್ಮ ಬಾಯಿ ತೆರೆಯುತ್ತಾರೆ; ನಿಂದೆಗಾಗಿ ನನ್ನ ಕೆನ್ನೆಗಳನ್ನು ಬಡಿಯುತ್ತಾರೆ. ಏಕವಾಗಿ ನನ್ನ ಮೇಲೆ ಕೂಡಿಕೊಳ್ಳುತ್ತಾರೆ. |
11. | ದೇವರು ನನ್ನನ್ನು ಭಕ್ತಿಹೀನರಿಗೆ ಒಪ್ಪಿಸುತ್ತಾನೆ. ದುಷ್ಟರ ಕೈಗೆ ನನ್ನನ್ನು ಕೊಟ್ಟುಬಿಡುತ್ತಾನೆ. |
12. | ನಾನು ಶಾಂತವಾಗಿದ್ದಾಗ ನನ್ನನ್ನು ಪುಡಿಪುಡಿ ಮಾಡಿದನು. ನನ್ನ ಕುತ್ತಿಗೆ ಹಿಡಿದು ಚೂರುಚೂರಾಗಿ ಮಾಡಿದನು; ನನ್ನನ್ನು ತನಗೆ ಗುರಿಯಾಗಿ ನಿಲ್ಲಿಸಿದನು; |
13. | ಆತನ ಬಿಲ್ಲುಗಾರರು ನನ್ನನ್ನು ಸುತ್ತಿಕೊಂಡಿದ್ದಾರೆ; ನನ್ನ ಗುಂಡಿಗೆಗಳನ್ನು ಕಡಿಯುತ್ತಾನೆ. ಕರುಣಿಸುವದಿಲ್ಲ; ನನ್ನ ಪಿತ್ತವನ್ನು ಭೂಮಿಗೆ ಚೆಲ್ಲುತ್ತಾನೆ. |
14. | ನನ್ನನ್ನು ಒಡೆದೊಡೆದು ಸಿಥಿಲಪಡಿಸಿ; ಆತನು ಶೂರನಂತೆ ನನ್ನ ಮೇಲೆ ಓಡಿಬರುತ್ತಾನೆ. |
15. | ನನ್ನ ಮೈಮೇಲೆ ಗೋಣೀ ತಟ್ಟು ಹೊಲಿದು ಧರಿಸಿದೆನು; ಧೂಳಿನಲ್ಲಿ ನನ್ನ ಕೊಂಬನ್ನು ಅಪವಿತ್ರಮಾಡಿದೆನು. |
16. | ನನ್ನ ಮುಖವು ಅಳುವದರಿಂದ ಉಬ್ಬಿ ಕೆಂಪಾಯಿತು; ನನ್ನ ರೆಪ್ಪೆಗಳ ಮೇಲೆ ಮರಣದ ನೆರಳು ಅದೇ; |
17. | ಆದರೂ ನನ್ನ ಕೈಗಳಲ್ಲಿ ಬಲಾತ್ಕಾರವಿಲ್ಲ; ನನ್ನ ಪ್ರಾರ್ಥನೆಯು ನಿರ್ಮಲವಾಗಿದೆ. |
18. | ಭೂಮಿಯೇ, ನನ್ನ ರಕ್ತವನ್ನು ಮುಚ್ಚಬೇಡ; ನನ್ನ ಕೂಗಿಗೆ ಸ್ಥಳ ಇಲ್ಲದೆ ಇರಲಿ. |
19. | ಈಗ ಇಗೋ, ಆಕಾಶದಲ್ಲಿ ನನ್ನ ಸಾಕ್ಷಿ ಉಂಟು; ನನ್ನ ಸಾಕ್ಷಿಯು ಉನ್ನತದಲ್ಲಿ ಅದೆ. |
20. | ನನ್ನ ಸ್ನೇಹಿತರೇ ನನ್ನನ್ನು ಹಾಸ್ಯಮಾಡುತ್ತಾರೆ; ದೇವರಿಗೆ ನನ್ನ ಕಣ್ಣೀರನ್ನು ಸುರಿಸುತ್ತೇನೆ. |
21. | ಒಬ್ಬನು ತನ್ನ ನೆರೆಯವನಿಗೋಸ್ಕರ ವ್ಯಾಜ್ಯವಾಡುವಂತೆ ಮನುಷ್ಯನಿಗೋಸ್ಕರ ದೇವರ ಮುಂದೆ ವ್ಯಾಜ್ಯವಾಡುತ್ತಿದ್ದರೆ ಎಷ್ಟೋ ಒಳ್ಳೇದು. |
22. | ಕೆಲವು ವರುಷಗಳು ಮುಗಿದಾಗ ನಾನು ತಿರುಗಿ ಬಾರದ ದಾರಿಹಿಡಿದು ಹೋಗುತ್ತೇನೆ. |
← Job (16/42) → |