← Genesis (26/50) → |
1. | ಅಬ್ರಹಾಮನ ದಿನಗಳಲ್ಲಿ ಬಂದ ಮೊದಲನೆಯ ಬರವಲ್ಲದೆ ದೇಶದಲ್ಲಿ ಮತ್ತೊಂದು ಬರ ಬಂದಿತು. ಆಗ ಇಸಾಕನು ಗೆರಾರಿನಲ್ಲಿದ್ದ ಫಿಲಿಷ್ಟಿಯರ ಅರಸನಾದ ಅಬೀಮೆಲೆಕನ ಬಳಿಗೆ ಹೋದನು. |
2. | ಆಗ ಕರ್ತನು ಅವನಿಗೆ ಕಾಣಿಸಿಕೊಂಡು--ಐಗುಪ್ತಕ್ಕೆ ಇಳಿದು ಹೋಗಬೇಡ. ನಾನು ನಿನಗೆ ಹೇಳುವ ದೇಶದಲ್ಲಿ ವಾಸವಾಗಿರು. |
3. | ನೀನು ಈ ದೇಶದಲ್ಲಿ ಪ್ರವಾಸಿಯಾಗಿರು; ನಾನು ನಿನ್ನ ಸಂಗಡ ಇದ್ದು ನಿನ್ನನ್ನು ಆಶೀರ್ವದಿಸುವೆನು. ನಿನಗೂ ನಿನ್ನ ಸಂತಾನಕ್ಕೂ ಈ ಪ್ರದೇಶಗಳನ್ನೆಲ್ಲಾ ಕೊಡುವೆನು. ನಿನ್ನ ತಂದೆಯಾದ ಅಬ್ರಹಾಮನಿಗೆ ನಾನು ಮಾಡಿದ ಪ್ರಮಾಣವನ್ನು ಈಡೇರಿಸುವೆನು. |
4. | ನಿನ್ನ ಸಂತತಿಯನ್ನು ಆಕಾಶದ ನಕ್ಷತ್ರಗಳಂತೆ ಹೆಚ್ಚಿಸುವೆನು. ನಿನ್ನ ಸಂತತಿಗೆ ಈ ಪ್ರದೇಶಗಳನ್ನೆಲ್ಲಾ ಕೊಡುವೆನು. ನಿನ್ನ ಸಂತತಿಯಲ್ಲಿ ಭೂಮಿಯ ಜನಾಂಗ ಗಳೆಲ್ಲಾ ಆಶೀರ್ವದಿಸಲ್ಪಡುವವು. |
5. | ಅಬ್ರಹಾಮನು ನನ್ನ ಮಾತಿಗೆ ವಿಧೇಯನಾಗಿ ನನ್ನ ನೇಮವಿಧಿ ಆಜ್ಞೆ ಕಟ್ಟಳೆಗಳನ್ನು ಕೈಕೊಂಡನು ಅಂದನು. |
6. | ಆಗ ಇಸಾಕನು ಗೆರಾರಿನಲ್ಲಿ ವಾಸವಾಗಿದ್ದನು. |
7. | ಆ ಸ್ಥಳದ ಮನುಷ್ಯರು ಅವನ ಹೆಂಡತಿಯ ವಿಷಯದಲ್ಲಿ ವಿಚಾರಿಸಿದಾಗ ಅವನು--ರೆಬೆಕ್ಕಳು ನೋಟಕ್ಕೆ ಸೌಂದರ್ಯಳಾಗಿದ್ದರಿಂದ ಈಕೆಯ ನಿಮಿತ್ತ ಆ ಸ್ಥಳದ ಜನರು ತನ್ನನ್ನು ಕೊಂದಾರೆಂದು ಆಕೆಯು ತನ್ನ ಹೆಂಡತಿಯೆಂದು ಹೇಳುವದಕ್ಕೆ ಅಂಜಿ ಅವನು--ಆಕೆಯು ನನ್ನ ತಂಗಿ ಅಂದನು. |
8. | ಅವನು ಅಲ್ಲಿ ಬಹಳ ದಿನಗಳಿದ್ದ ಮೇಲೆ ಆದದ್ದೇನಂದರೆ, ಫಿಲಿಷ್ಟಿಯರ ಅರಸನಾದ ಅಬೀಮೆಲೆ ಕನು ಕಿಟಕಿಯಿಂದ ನೋಡುತ್ತಿದಾಗ ಅಗೋ, ಇಸಾಕನು ತನ್ನ ಹೆಂಡತಿಯಾದ ರೆಬೆಕ್ಕಳ ಸಂಗಡ ಸರಸವಾಡುತ್ತಿದ್ದನು. |
9. | ಆಗ ಅಬೀಮೆಲೆಕನು ಇಸಾಕ ನನ್ನು ಕರೆದು--ಅಗೋ, ಆಕೆಯು ಖಂಡಿತ ನಿನ್ನ ಹೆಂಡತಿಯಾಗಿದ್ದಾಳೆ. ಆದರೆ ನೀನು--ಆಕೆಯು ನನ್ನ ತಂಗಿ ಎಂದು ಯಾಕೆ ಹೇಳಿದಿ ಅಂದನು. ಇಸಾಕನು ಅವನಿಗೆ--ನಾನು ಆಕೆಯ ನಿಮಿತ್ತ ಸಾಯಬಾರ ದೆಂದು ಹಾಗೆ ಹೇಳಿದೆನು ಅಂದನು. |
10. | ಆಗ ಅಬೀಮೆಲೆಕನು--ನೀನು ನಮಗೆ ಮಾಡಿದ್ದೇನು? ಜನರಲ್ಲಿ ಒಬ್ಬನು ನಿನ್ನ ಹೆಂಡತಿಯ ಸಂಗಡ ಮಲಗಿದ್ದರೆ ನೀನು ನಮ್ಮ ಮೇಲೆ ಅಪರಾಧವನ್ನು ಬರಮಾಡುತ್ತಿದ್ದೆಯಲ್ಲಾ ಅಂದನು. |
11. | ಅಬೀಮೆಲೆಕನು ತನ್ನ ಜನರಿಗೆಲ್ಲಾ--ಈ ಮನುಷ್ಯನನ್ನಾಗಲಿ ಅವನ ಹೆಂಡತಿಯನ್ನಾಗಲಿ ಮುಟ್ಟುವವನು ಖಂಡಿತವಾಗಿ ಸಾಯಬೇಕು ಎಂದು ಅಪ್ಪಣೆಕೊಟ್ಟನು. |
12. | ಇದಲ್ಲದೆ ಇಸಾಕನು ಆ ದೇಶದಲ್ಲಿ ಬಿತ್ತಿದ ವರುಷದಲ್ಲಿಯೇ ನೂರರಷ್ಟು ಫಲವನ್ನು ಹೊಂದಿ ದನು. ಕರ್ತನು ಅವನನ್ನು ಆಶೀರ್ವದಿಸಿದನು. |
13. | ಅವನು ಅತಿ ದೊಡ್ಡವನಾಗುವ ವರೆಗೆ ಕ್ರಮೇಣ ಅಭಿವೃದ್ಧಿಯಾಗುತ್ತಾ ಬಂದನು. |
14. | ಅವನಿಗೆ ಕುರಿ ಮಂದೆಗಳೂ ದನಗಳ ಹಿಂಡೂ ಬಹಳ ಮಂದಿ ಸೇವಕರೂ ಇದ್ದರು. ಆದದರಿಂದ ಫಿಲಿಷ್ಟಿಯರು ಅವನ ಮೇಲೆ ಹೊಟ್ಟೇಕಿಚ್ಚುಪಟ್ಟರು. |
15. | ಅವನ ತಂದೆಯಾದ ಅಬ್ರಹಾಮನ ದಿನಗಳಲ್ಲಿ ಅಬ್ರಹಾಮನ ಸೇವಕರು ಅಗಿದ ಬಾವಿಗಳನ್ನೆಲ್ಲಾ ಫಿಲಿಷ್ಟಿಯರು ಮಣ್ಣಿನಿಂದ ಮುಚ್ಚಿದರು. |
16. | ಆಗ ಅಬೀಮೆಲೆಕನು ಇಸಾಕನಿಗೆ--ನೀನು ನಮಗಿಂತ ಬಲಿಷ್ಟನಾದಿ ಆದುದ ರಿಂದ ನಮ್ಮ ಬಳಿಯಿಂದ ಹೋಗು, ಅಂದನು. |
17. | ಆಗ ಇಸಾಕನು ಅಲ್ಲಿಂದ ಹೋಗಿ ಗೆರಾರಿನ ತಗ್ಗಿನಲ್ಲಿ ಗುಡಾರ ಹಾಕಿ ಅಲ್ಲಿ ವಾಸಮಾಡಿದನು. |
18. | ಇದಲ್ಲದೆ ಇಸಾಕನು ತನ್ನ ತಂದೆಯಾದ ಅಬ್ರಹಾ ಮನ ದಿನಗಳಲ್ಲಿ ಅಗಿದಂಥ ಬಾವಿಗಳನ್ನು ತಿರಿಗಿ ಅಗಿದನು. ಯಾಕಂದರೆ ಅಬ್ರಹಾಮನು ಸತ್ತ ಮೇಲೆ ಫಿಲಿಷ್ಟಿಯರು ಅವುಗಳನ್ನು ಮುಚ್ಚಿದ್ದರು. ಅವುಗಳಿಗೆ ತನ್ನ ತಂದೆಯು ಕೊಟ್ಟ ಹೆಸರುಗಳ ಪ್ರಕಾರವೇ ಅವನು ಅವುಗಳಿಗೆ ಹೆಸರು ಕೊಟ್ಟನು. |
19. | ಇಸಾಕನ ಸೇವಕರು ತಗ್ಗಿನಲ್ಲಿ ಅಗಿದಾಗ ಅಲ್ಲಿ ಅವರಿಗೆ ಒಂದು ಉಕ್ಕುವ ಒರತೆಯ ಬಾವಿಯು ಸಿಕ್ಕಿತು. |
20. | ಗೆರಾರಿನ ಮಂದೆಯನ್ನು ಮೇಯಿಸುವವರು --ಈ ನೀರು ನಮ್ಮದು ಎಂದು ಇಸಾಕನ ಮಂದೆಯನ್ನು ಮೇಯಿಸುವವರ ಸಂಗಡ ಜಗಳವಾಡಿದರು. ಅವರು ಅವನ ಸಂಗಡ ಜಗಳವಾಡಿದ ಕಾರಣ ಅವನು ಆ ಬಾವಿಗೆ ಏಸೆಕ್ ಎಂದು ಹೆಸರಿಟ್ಟನು. |
21. | ತರುವಾಯ ಅವರು ಇನ್ನೊಂದು ಬಾವಿಯನ್ನು ಅಗಿದಾಗ ಅದಕ್ಕಾಗಿಯೂ ಅವರು ಜಗಳವಾಡಿದಾಗ ಅವನು ಅದಕ್ಕೆ ಸಿಟ್ನಾ ಎಂದು ಹೆಸರಿಟ್ಟನು. |
22. | ಅಲ್ಲಿಂದ ಅವನು ಹೊರಟುಹೋಗಿ ಇನ್ನೊಂದು ಬಾವಿಯನ್ನು ಅಗಿದಾಗ ಅದಕ್ಕಾಗಿ ಅವರು ಜಗಳವಾಡಲಿಲ್ಲ. ಅದಕ್ಕೆ ಅವನು--ಈಗ ಕರ್ತನು ನಮಗೆ ಸ್ಥಳವನ್ನು ಮಾಡಿದ್ದಾನೆ; ನಾವು ಈ ದೇಶದಲ್ಲಿ ಅಭಿವೃದ್ಧಿ ಯಾಗುವೆವು ಎಂದು ಹೇಳಿ ಅದಕ್ಕೆ ರೆಹೋಬೋತ್ ಎಂದು ಹೆಸರಿಟ್ಟನು. |
23. | ಅಲ್ಲಿಂದ ಅವನು ಬೇರ್ಷೆಬಕ್ಕೆ ಏರಿಹೋದನು. |
24. | ಅದೇ ರಾತ್ರಿಯಲ್ಲಿ ಕರ್ತನು ಅವನಿಗೆ ಕಾಣಿಸಿ ಕೊಂಡು--ನಿನ್ನ ತಂದೆಯಾದ ಅಬ್ರಹಾಮನ ದೇವರು ನಾನೇ; ಭಯಪಡಬೇಡ; ನಾನು ನಿನ್ನ ಸಂಗಡ ಇದ್ದೇನೆ; ನನ್ನ ದಾಸನಾದ ಅಬ್ರಹಾಮನಿಗೋಸ್ಕರ ನಿನ್ನನ್ನು ಆಶೀರ್ವದಿಸಿ ನಿನ್ನ ಸಂತತಿಯನ್ನು ಹೆಚ್ಚಿಸುವೆನು ಅಂದನು. |
25. | ಆಗ ಅವನು ಬಲಿಪೀಠವನ್ನು ಕಟ್ಟಿ ಕರ್ತನ ಹೆಸರನ್ನು ಹೇಳಿಕೊಂಡು ಅಲ್ಲಿ ತನ್ನ ಗುಡಾರ ವನ್ನು ಹಾಕಿದನು. ಆಗ ಇಸಾಕನ ಸೇವಕರು ಅಲ್ಲಿ ಒಂದು ಬಾವಿಯನ್ನು ಅಗಿದರು. |
26. | ತರುವಾಯ ಅಬೀಮೆಲೆಕನೂ ಅವನ ಸ್ನೇಹಿತರಲ್ಲಿ ಒಬ್ಬನಾದ ಅಹುಜ್ಜತನೂ ಅವನ ಮುಖ್ಯ ಸೈನ್ಯಾಧಿಪತಿ ಯಾದ ಫೀಕೋಲನೂ ಗೆರಾರಿನಿಂದ ಅವನ ಬಳಿಗೆ ಬಂದರು. |
27. | ಇಸಾಕನು ಅವರಿಗೆ--ನನ್ನ ಬಳಿಗೆ ನೀವು ಯಾಕೆ ಬಂದಿದ್ದೀರಿ? ನೀವು ನನ್ನನ್ನು ಹಗೆಮಾಡಿ ನಿಮ್ಮ ಬಳಿಯಿಂದ ನನ್ನನ್ನು ಕಳುಹಿಸಿ ಬಿಟ್ಟಿರಲ್ಲಾ ಅಂದನು. |
28. | ಅದಕ್ಕೆ ಅವರು--ನಿಶ್ಚಯವಾಗಿ ಕರ್ತನು ನಿನ್ನ ಸಂಗಡ ಇದ್ದಾನೆಂದು ತಿಳಿದು ನಮಗೂ ನಿನಗೂ ಮಧ್ಯದಲ್ಲಿ ಒಂದು ಪ್ರಮಾಣ ವಿರುವ ಹಾಗೆ ನಿನ್ನ ಸಂಗಡ ಒಡಂಬಡಿಕೆ ಮಾಡಿ ಕೊಳ್ಳೋಣವೆಂದು ನಾವು ಅಂದುಕೊಂಡೆವು; |
29. | ಅದೇನಂದರೆ--ನಾವು ನಿನ್ನನ್ನು ಮುಟ್ಟದೆ ನಿನಗೆ ಒಳ್ಳೇದನ್ನೇ ಮಾಡಿ ನಿನ್ನನ್ನು ಸಮಾಧಾನದಿಂದ ಕಳುಹಿಸಿದ ಹಾಗೆ ನೀನು ನಮಗೂ ಕೇಡು ಮಾಡಬಾರದು; ನೀನು ಈಗ ಕರ್ತನಿಂದ ಆಶೀರ್ವದಿ ಸಲ್ಪಟ್ಟವನಾಗಿದ್ದೀ ಅಂದರು. |
30. | ಆಗ ಅವನು ಅವರಿಗೆ ಔತಣವನ್ನು ಮಾಡಿಸಿದನು. ಅವರು ತಿಂದು ಕುಡಿದರು; |
31. | ಬೆಳಿಗ್ಗೆ ಎದ್ದು ಒಬ್ಬರಿಗೊಬ್ಬರು ಪ್ರಮಾಣಮಾಡಿಕೊಂಡರು. ಆಗ ಇಸಾಕನು ಅವರನ್ನು ಕಳುಹಿಸಿಕೊಟ್ಟನು. ಅವರು ಸಮಾಧಾನದೊಡನೆ ಅವನ ಬಳಿಯಿಂದ ಹೊರಟುಹೋದರು. |
32. | ಅದೇ ದಿನದಲ್ಲಿ ಆದದ್ದೇನಂದರೆ, ಇಸಾಕನ ಸೇವಕರು ಬಂದು ತಾವು ಅಗಿದ ಬಾವಿಯಲ್ಲಿ ನೀರು ಸಿಕ್ಕಿತೆಂದು ಅವನಿಗೆ ಹೇಳಿದರು. |
33. | ಅದಕ್ಕೆ ಅವನು ಷಿಬಾ ಎಂದು ಹೆಸರಿಟ್ಟನು. ಆದದರಿಂದ ಇಂದಿನ ವರೆಗೂ ಬೇರ್ಷೆಬ ಎಂದು ಆ ಪಟ್ಟಣಕ್ಕೆ ಹೆಸರಾಯಿತು. |
34. | ಏಸಾವನು ನಾಲ್ವತ್ತು ವರುಷದವನಾಗಿದ್ದಾಗ ಹಿತ್ತಿಯನಾದ ಬೇರಿಯನ ಮಗಳಾದ ಯೆಹೂದೀತ ಳನ್ನೂ ಹಿತ್ತಿಯನಾದ ಏಲೋನನ ಮಗಳಾದ ಬಾಸೆಮತಳನ್ನೂ ಹೆಂಡತಿಯರನ್ನಾಗಿ ತಕ್ಕೊಂಡನು. |
35. | ಇವರು ಇಸಾಕನಿಗೂ ರೆಬೆಕ್ಕಳಿಗೂ ಮನೋವ್ಯಥೆ ಯಾಗಿದ್ದರು. |
← Genesis (26/50) → |