← Exodus (4/40) → |
1. | ಮೋಶೆಯು ಪ್ರತ್ಯುತ್ತರವಾಗಿ--ಆದರೆ ಇಗೋ, ಅವರು ನನ್ನನ್ನು ನಂಬುವದಿಲ್ಲ, ನನ್ನ ಮಾತನ್ನು ಕೇಳುವದೂ ಇಲ್ಲ. ಅವರು--ಕರ್ತನು ನಿನಗೆ ಕಾಣಿಸಿಕೊಳ್ಳಲಿಲ್ಲ ಎಂದು ಹೇಳುವರು ಅಂದನು. |
2. | ಕರ್ತನು ಅವನಿಗೆ--ನಿನ್ನ ಕೈಯಲ್ಲಿರುವದೇನು ಅಂದದ್ದಕ್ಕೆ ಅವನು--ಕೋಲು ಅಂದನು. |
3. | ಕರ್ತನು ಅವನಿಗೆ--ಅದನ್ನು ನೆಲದ ಮೇಲೆ ಬಿಸಾಡು ಅಂದಾಗ ಅವನು ಅದನ್ನು ಬಿಸಾಡಿದನು; ಆಗ ಅದು ಸರ್ಪ ವಾಯಿತು. ಮೋಶೆಯು ಅಲ್ಲಿಂದ ಓಡಿಹೋದನು. |
4. | ಕರ್ತನು ಮೋಶೆಗೆ--ನಿನ್ನ ಕೈಚಾಚಿ ಅದರ ಬಾಲ ವನ್ನು ಹಿಡಿ ಅಂದಾಗ ಅವನು ಕೈಚಾಚಿ ಅದನ್ನು ಹಿಡಿದ ಕೂಡಲೆ ಅದು ಅವನ ಕೈಯಲ್ಲಿ ಕೋಲಾಯಿತು. |
5. | ಇದರಿಂದ ಅವರು ತಮ್ಮ ಪಿತೃಗಳಾದ ಅಬ್ರಹಾಮ್ ಇಸಾಕ್ ಯಾಕೋಬ್ ಇವರ ಕರ್ತನಾದ ದೇವರು ನಿನಗೆ ಕಾಣಿಸಿದ್ದನ್ನು ಅವರು ನಂಬುವರು ಅಂದನು. |
6. | ಇದಲ್ಲದೆ ಕರ್ತನು ಅವನ ಸಂಗಡ ಇನ್ನೂ ಮಾತನಾಡಿ--ನಿನ್ನ ಕೈಯನ್ನು ಉಡಿಯಲ್ಲಿ ಹಾಕು ಅಂದಾಗ ಅವನು ತನ್ನ ಕೈಯನ್ನು ಉಡಿಯಲ್ಲಿ ಹಾಕಿ ಹೊರಗೆ ತೆಗೆಯಲು ಇಗೋ, ಅವನ ಕೈ ಕುಷ್ಠದಿಂದ ಹಿಮದಂತೆ ಆಗಿತ್ತು. |
7. | ಆತನು ಅವನಿಗೆ--ನಿನ್ನ ಕೈಯನ್ನು ಉಡಿಯಲ್ಲಿ ಹಾಕು ಅಂದಾಗ ಅವನು ತನ್ನ ಕೈಯನ್ನು ಉಡಿಯಲ್ಲಿ ಹಾಕಿ ಉಡಿಯಿಂದ ಹೊರಗೆ ತೆಗೆಯಲು ಇಗೋ, ಅದು ಅವನ ಬೇರೆ ದೇಹದಂತಾಗಿತ್ತು. |
8. | ಅವರು ನಿನ್ನನ್ನು ನಂಬದೆ ಮೊದಲನೆಯ ಮಹ ತ್ಕಾರ್ಯವನ್ನು ತಿರಸ್ಕರಿಸಿದರೂ ಎರಡನೆಯದನ್ನು ಲಕ್ಷ್ಯವಿಟ್ಟು ನಂಬುವರು. |
9. | ಆ ಎರಡೂ ಮಹತ್ಕಾರ್ಯ ಗಳನ್ನು ಅವರು ನಂಬದೆಯೂ ನಿನ್ನ ಮಾತನ್ನು ಕೇಳ ದೆಯೂ ಹೋದರೆ ನದಿಯ ನೀರನ್ನು ತೆಗೆದು ಒಣಗಿದ ನೆಲದಮೇಲೆ ಸುರಿಯಬೇಕು. ಆಗ ನೀನು ನದಿಯಿಂದ ತೆಗೆದ ನೀರು ಒಣಗಿದ ನೆಲದ ಮೇಲೆ ರಕ್ತವಾಗುವದು ಅಂದನು. |
10. | ಮೋಶೆಯು ಕರ್ತನಿಗೆ--ಓ ನನ್ನ ಕರ್ತನೇ, ನಾನು ಮೊದಲಿನಿಂದಲೂ ನೀನು ನಿನ್ನ ದಾಸನ ಸಂಗಡ ಮಾತನಾಡಿದಂದಿನಿಂದಲೂ ವಾಕ್ಚಾತುರ್ಯವಿ ಲ್ಲದವನು. ನನ್ನ ಮಾತೂ ನಾಲಿಗೆಯೂ ಮಂದವಾಗಿವೆ ಅಂದನು. |
11. | ಅದಕ್ಕೆ ಕರ್ತನು ಅವನಿಗೆ--ಮನುಷ್ಯನಿಗೆ ಬಾಯಿ ಕೊಟ್ಟಾತನೂ ಮೂಕರನ್ನೂ ಕಿವುಡರನ್ನೂ ದೃಷ್ಟಿಯುಳ್ಳವರನ್ನೂ ಕುರುಡರನ್ನೂ ಉಂಟುಮಾಡಿ ದಾತನೂ ಯಾರು? ಕರ್ತನಾದ ನಾನೇ ಅಲ್ಲವೋ? |
12. | ಹಾಗಾದರೆ ಈಗ ಹೋಗು, ನಾನೇ ನಿನ್ನ ಬಾಯಿ ಯಾಗಿದ್ದು ನೀನು ಮಾತನಾಡತಕ್ಕದ್ದನ್ನು ನಿನಗೆ ಬೋಧಿಸುವೆನು ಅಂದನು. |
13. | ಅದಕ್ಕೆ ಮೋಶೆಯು--ಓ ನನ್ನ ಕರ್ತನೇ, ನೀನು ಕಳುಹಿಸಬೇಕೆಂದಿರುವವನನ್ನು ಕಳುಹಿಸು ಎಂದು ಬೇಡುತ್ತೇನೆ ಅಂದನು. |
14. | ಕರ್ತನು ಮೋಶೆಯ ಮೇಲೆ ಕೋಪಗೊಂಡು--ಲೇವಿಯನಾದ ಆರೋನನು ನಿನ್ನ ಸಹೋದರನಲ್ಲವೇ? ಅವನು ಚೆನ್ನಾಗಿ ಮಾತನಾಡ ಬಲ್ಲನೆಂದು ನಾನು ಬಲ್ಲೆನು. ಇಗೋ, ಅವನು ನಿನ್ನನ್ನು ಎದುರು ಗೊಳ್ಳುವದಕ್ಕೆ ಬರುತ್ತಾನೆ. ಅವನು ನಿನ್ನನ್ನು ನೋಡಿ ತನ್ನ ಹೃದಯದಲ್ಲಿ ಆನಂದಿಸುವನು. |
15. | ಅವನ ಸಂಗಡ ನೀನು ಮಾತನಾಡಿ ಹೇಳಬೇಕಾದ ಮಾತು ಗಳನ್ನು ಅವನಿಗೆ ತಿಳಿಸಬೇಕು. ನಿನ್ನ ಬಾಯಿಗೂ ಅವನ ಬಾಯಿಗೂ ಸಹಾಯವಾಗಿದ್ದು ನೀನು ಮಾಡತಕ್ಕದ್ದನ್ನು ಕಲಿಸುವೆನು. |
16. | ಅವನು ನಿನಗಾಗಿ ಜನರ ಸಂಗಡ ಮಾತನಾಡುವನು. ಅವನು ನಿನಗೆ ಬಾಯಿಯಾಗಿ ರುವನು; ನೀನು ಅವನಿಗೆ ದೇವರಂತಿರುವಿ. |
17. | ಈ ಕೋಲನ್ನು ನಿನ್ನ ಕೈಯಲ್ಲಿ ತಕ್ಕೊಳ್ಳಬೇಕು. ನೀನು ಇದರಿಂದಲೇ ಆ ಸೂಚಕಕಾರ್ಯಗಳನ್ನು ಮಾಡುವಿ ಅಂದನು. |
18. | ಆಗ ಮೋಶೆಯು ಹೋಗಿ ತನ್ನ ಮಾವನಾದ ಇತ್ರೋನನ ಬಳಿಗೆ ಬಂದು ಅವನಿಗೆ--ಐಗುಪ್ತ ದಲ್ಲಿರುವ ನನ್ನ ಸಹೋದರರ ಬಳಿಗೆ ಹಿಂತಿರುಗಿ ಹೋಗಿ ಅವರು ಇನ್ನೂ ಜೀವದಿಂದಿರುವರೋ ಎಂದು ನೋಡುವೆನು ಅಂದನು. ಇತ್ರೋನನು ಮೋಶೆಗೆ--ಸಮಾಧಾನದಿಂದ ಹೋಗು ಅಂದನು. |
19. | ಇದಲ್ಲದೆ ಕರ್ತನು ಮಿದ್ಯಾನಿನಲ್ಲಿ ಮೋಶೆಗೆ--ಐಗುಪ್ತಕ್ಕೆ ಹಿಂತಿರುಗಿ ಹೋಗು; ನಿನ್ನ ಪ್ರಾಣವನ್ನು ಹುಡುಕಿದ ಜನರೆಲ್ಲಾ ಸತ್ತಿದ್ದಾರೆ ಅಂದನು. |
20. | ಆಗ ಮೋಶೆಯು ತನ್ನ ಹೆಂಡತಿಯನ್ನೂ ಮಕ್ಕಳನ್ನೂ ಕರ ಕೊಂಡು ಕತ್ತೆಯಮೇಲೆ ಹತ್ತಿಸಿ ಐಗುಪ್ತ ದೇಶಕ್ಕೆ ಹಿಂತಿರುಗಿ ಬಂದನು. ಇದಲ್ಲದೆ ಮೋಶೆಯು ದೇವರ ಕೋಲನ್ನು ಕೈಯಲ್ಲಿ ತಕ್ಕೊಂಡನು. |
21. | ಆಗ ಕರ್ತನು ಮೋಶೆಗೆ--ನೀನು ಐಗುಪ್ತದೇಶಕ್ಕೆ ಹಿಂತಿರುಗಿ ಹೋಗು ವಾಗ ನಾನು ನಿನ್ನ ಕೈಯಿಂದ ಮಾಡಿಸಿದ ಎಲ್ಲಾ ಸೂಚಕ ಕಾರ್ಯಗಳನ್ನು ಫರೋಹನ ಮುಂದೆ ಮಾಡು. ಆದರೆ ನಾನು ಅವನ ಹೃದಯವನ್ನು ಕಠಿಣಪಡಿಸುವೆನು. ಅವನು ಜನರನ್ನು ಹೋಗಗೊಡಿಸುವದಿಲ್ಲ. |
22. | ಆಗ ನೀನು ಫರೋಹನಿಗೆ--ಕರ್ತನು ಹೀಗೆ ಹೇಳುತ್ತಾನೆ; ಇಸ್ರಾಯೇಲು ನನ್ನ ಮಗನು. ಅವನು ನನ್ನ ಚೊಚ್ಚಲ ಮಗನೇ ಎಂದು ಹೇಳಬೇಕು. |
23. | (ಫರೋಹನೇ) ನಾನು ನಿನಗೆ ಹೇಳುವದೇನಂದರೆ--ನನ್ನ ಸೇವೆಮಾಡು ವಂತೆ ನನ್ನ ಮಗನನ್ನು ಕಳುಹಿಸು. ನೀನು ಅವನನ್ನು ಕಳುಹಿಸುವದನ್ನು ನಿರಾಕರಿಸಿದರೆ ಇಗೋ, ನಾನು ನಿನ್ನ ಮಗನನ್ನು ಅಂದರೆ ನಿನ್ನ ಚೊಚ್ಚಲಮಗನನ್ನು ಕೊಲ್ಲುವೆನು ಅಂದನು. |
24. | ಇದಲ್ಲದೆ ಅವನು ದಾರಿಯ ವಸತಿ ಗೃಹದಲ್ಲಿ ದ್ದಾಗ ಕರ್ತನು ಅವನೆದುರಿಗೆ ಬಂದು ಅವನ ಪ್ರಾಣ ತೆಗೆಯಬೇಕೆಂದಿದ್ದನು. |
25. | ಆಗ ಚಿಪ್ಪೋರಳು ಹದವಾದ ಕಲ್ಲನ್ನು ತೆಗೆದುಕೊಂಡು ತನ್ನ ಮಗನಿಗೆ ಸುನ್ನತಿ ಮಾಡಿ ಅದನ್ನು ಅವನ ಕಾಲುಗಳ ಮುಂದೆ ಹಾಕಿ ಮೋಶೆಗೆ--ನಿಜವಾಗಿ ನೀನು ನನಗೆ ರಕ್ತದ ಗಂಡನು ಅಂದಳು. |
26. | ಆಗ ಆತನು ಅವನನ್ನು ಬಿಟ್ಟನು. ಅವಳು--ಸುನ್ನತಿಯ ನಿಮಿತ್ತ ನೀನು ರಕ್ತದ ಗಂಡ ನಾಗಿದ್ದೀ ಅಂದಳು. |
27. | ಇದಲ್ಲದೆ ಕರ್ತನು ಆರೋನನಿಗೆ--ಮೋಶೆ ಯನ್ನು ಎದುರುಗೊಳ್ಳುವದಕ್ಕೆ ಅರಣ್ಯಕ್ಕೆ ಹೋಗು ಅಂದನು. ಅವನು ಹೋಗಿ ದೇವರ ಬೆಟ್ಟದಲ್ಲಿ ಅವನನ್ನು ಎದುರುಗೊಂಡು ಮುದ್ದಿಟ್ಟನು. |
28. | ಆಗ ಮೋಶೆಯು ಆರೋನನಿಗೆ ತನ್ನನ್ನು ಕಳುಹಿಸಿದ ಕರ್ತನ ಎಲ್ಲಾ ಮಾತುಗಳನ್ನೂ ತನಗೆ ಆಜ್ಞಾಪಿಸಿದ ಎಲ್ಲಾ ಸೂಚಕಕಾರ್ಯಗಳನ್ನೂ ತಿಳಿಸಿದನು. |
29. | ತರುವಾಯ ಮೋಶೆಯೂ ಆರೋನನೂ ಹೋಗಿ ಇಸ್ರಾಯೇಲ್ ಮಕ್ಕಳ ಹಿರಿಯರನ್ನೆಲ್ಲಾ ಒಟ್ಟುಗೂಡಿಸಿದರು. |
30. | ಕರ್ತನು ಮೋಶೆಗೆ ಹೇಳಿದ ಮಾತುಗಳನ್ನೆಲ್ಲಾ ಆರೋನನು ಹೇಳಿ ಜನರ ಕಣ್ಣುಗಳ ಮುಂದೆ ಸೂಚಕ ಕಾರ್ಯಗಳನ್ನು ಮಾಡಲು. ಜನರು ನಂಬಿದರು. |
31. | ಕರ್ತನು ಇಸ್ರಾಯೇಲ್ ಮಕ್ಕಳನ್ನು ದರ್ಶಿಸಿ ಅವರ ಸಂಕಟವನ್ನು ನೋಡಿದ್ದಾನೆಂದು ಅವರು ಕೇಳಿದಾಗ ತಲೆಬಾಗಿಸಿ ಆರಾಧಿಸಿದರು. |
← Exodus (4/40) → |