Psalms (81/150)  

1. ನಮ್ಮ ಬಲವಾಗಿರುವ ದೇವರಿಗೆ ಗಟ್ಟಿಯಾದ ಧ್ವನಿಯಿಂದ ಹಾಡಿರಿ; ಯಾಕೋಬನ ದೇವರಿಗೆ ಜಯಧ್ವನಿಗೈಯಿರಿ.
2. ಕೀರ್ತನೆಯನ್ನು ಎತ್ತಿರಿ; ದಮ್ಮಡಿಯನ್ನೂ ರಮ್ಯವಾದ ಕಿನ್ನರಿಯನ್ನೂ ವೀಣೆಯ ಸಂಗಡ ತನ್ನಿರಿ.
3. ಅಮಾವಾಸ್ಯೆಯಲ್ಲಿಯೂ ನೇಮಕವಾದ ಪರಿಶುದ್ಧ ಹಬ್ಬದ ದಿವಸದಲ್ಲಿಯೂ ತುತೂರಿಯನ್ನು ಊದಿರಿ.
4. ಅದು ಇಸ್ರಾಯೇಲಿಗೆ ಕಟ್ಟಳೆಯೇ; ಯಾಕೋಬನ ದೇವರ ನ್ಯಾಯಪ್ರಮಾಣವೇ;
5. ನಾನು ತಿಳಿಯದ ಭಾಷೆಯನ್ನು ಕೇಳಿದ ಐಗುಪ್ತದೇಶದಲ್ಲೆಲ್ಲಾ ಆತನು ಹೊರಟಾಗ ಅದನ್ನು ಯೋಸೇಫನಲ್ಲಿ ಸಾಕ್ಷಿಯಾಗಿ ನೇಮಿಸಿದನು.
6. ಅವನ ಹೆಗಲಿನಿಂದ ಹೊರೆಯನ್ನು ತೊಲಗಿಸಿದನು; ಅವನ ಕೈಗಳು ಪುಟ್ಟಿಗಳಿಂದ ಬಿಡುಗಡೆ ಹೊಂದಿದವು.
7. ಇಕ್ಕಟ್ಟಿನಲ್ಲಿ ಕರೆದಿ; ಆಗ ನಾನು ನಿನ್ನನ್ನು ತಪ್ಪಿಸಿಬಿಟ್ಟೆನು; ಗುಡುಗಿನ ಮರೆಯಲ್ಲಿ ನಿನಗೆ ಉತ್ತರಕೊಟ್ಟು ಮೆರಿಬಾ ನೀರುಗಳ ಬಳಿಯಲ್ಲಿ ನಿನ್ನನ್ನು ಶೋಧಿಸಿದೆನು ಸೆಲಾ.
8. ಓ ನನ್ನ ಜನರೇ, ಕೇಳಿರಿ; ಓ ಇಸ್ರಾಯೇಲೇ, ನೀನು ನನ್ನನ್ನು ಕೇಳಿದರೆ ನಾನು ನಿನಗೆ ಸಾಕ್ಷಿ ಕೊಡು ವೆನು.
9. ನಿನ್ನಲ್ಲಿ ಅನ್ಯದೇವರು ಇರಬಾರದು; ಪರ ದೇವರಿಗೆ ಅಡ್ಡಬೀಳಬಾರದು.
10. ಐಗುಪ್ತದೇಶದಿಂದ ನಿನ್ನನ್ನು ಹೊರಗೆ ತಂದ ನಿನ್ನ ದೇವರಾದ ಕರ್ತನು ನಾನೇ; ನಿನ್ನ ಬಾಯನ್ನು ಅಗಲವಾಗಿ ತೆರೆ; ಆಗ ನಾನು ಅದನ್ನು ತುಂಬಿಸುವೆನು.
11. ಆದರೆ ನನ್ನ ಜನರು ನನ್ನ ಸ್ವರವನ್ನು ಕೇಳಲಿಲ್ಲ; ಇಸ್ರಾಯೇಲು ನನ್ನ ಮೇಲೆ ಮನಸ್ಸಿಡಲಿಲ್ಲ.
12. ಆದದರಿಂದ ಅವರ ಹೃದಯದ ದುರಾಶೆಗೆ ಅವರನ್ನು ನಾನು ಒಪ್ಪಿಸಿದೆನು; ಅವರು ತಮ್ಮ ಆಲೋಚನೆಗಳಲ್ಲಿ ನಡೆದುಕೊಂಡರು.
13. ಹಾ, ನನ್ನ ಜನರು ನನ್ನ ಮಾತನ್ನು ಕೇಳಿ, ಇಸ್ರಾಯೇಲು ನನ್ನ ಮಾರ್ಗದಲ್ಲಿ ನಡೆದುಕೊಂಡರೆ,
14. ತೀವ್ರವಾಗಿ ಅವರ ಶತ್ರುಗಳನ್ನು ಅಣಗಿಸುವೆನು; ಅವರ ವೈರಿಗಳ ಮೇಲೆ ನನ್ನ ಕೈಯನ್ನು ತಿರುಗಿಸುವೆನು.
15. ಕರ್ತನನ್ನು ಹಗೆಮಾಡುವವರು ಆತನಿಗೆ ತಮ್ಮನ್ನು ತಾವೇ ಒಪ್ಪಿಸಿಕೊಟ್ಟಿದ್ದರೆ ಅವರ ಕಾಲವು ಎಂದೆಂದಿಗೂ ಇರುತ್ತಿತ್ತು.
16. ಇದಲ್ಲದೆ ಆತನು ಉತ್ತಮವಾದ ಗೋಧಿ ಯಿಂದ ಅವರಿಗೆ ಊಟಕ್ಕೆ ಕೊಟ್ಟು ಬಂಡೆಯೊಳಗಿನ ಜೇನಿನಿಂದ ತೃಪ್ತಿಪಡಿಸುವನು.

  Psalms (81/150)